ಆದಿಬೈದೆರುಗಳ ಗರಡಿ

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ 

Garadi6

ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ಗರಡಿ ಇತಿಹಾಸ ಪ್ರಸಿದ್ಧ ಗರಡಿಯಾಗಿದೆ. ಪ್ರಕೃತ ದಕ್ಷಿಣ ಕನ್ನಡ, ಕಾಸರಗೋಡು , ಉಡುಪಿ, ಕೊಡಗು ಜಿಲ್ಲೆಯಲ್ಲಿ ಸುಮಾರು 2೦೦ಕ್ಕು ಹೆಚ್ಚು ಗರಡಿಗಳಿವೆ. ಎಲ್ಲಾ ಗರಡಿಗಳಿಗೆ *ಆದಿ(ಮೂಲ)* ಗರಡಿಯಾಗಿ ಎಣ್ಮೂರು ಗರಡಿ ನೆಲೆ ನಿಂತಿದೆ. ಈಗಾಗಲೇ ಮುಂಬೈನಲ್ಲಿಯೂ ಒಂದು ಗರಡಿ ನಿರ್ಮಾಣಗೊಂಡಿದೆ.ಸುಮಾರು 450 ವರ್ಷಗಳ ಹಿಂದೆ ಕೋಟಿ ಚೆನ್ನಯ ಅವಳಿ ವೀರರ ಜನನ ಒಂದೇ ದಿನ ಆಯಿತು. ಮುಂದೆ ಸುಮಾರು ಅಂದಾಜು 37ವರ್ಷ ಇವರು ಬಾಳಿ ಬೆಳಗಿದರು.

ಈ ಸಮಯದಲ್ಲಿ ಎಣ್ಮೂರು ಬಲ್ಲಾಳರಿಗೂ, ಪಂಜ ಬಲ್ಲಾಳರಿಗೂ ನಡೆದ ಯುದ್ಧದಲ್ಲಿ ಎಣ್ಮೂರು ಬೀಡಿನ ದೇವ ಬಲ್ಲಾಳರ ದಂಡಿನ ನೇತೃತ್ವ ವಹಿಸಿ ಧರ್ಮ ಯುದ್ಧದಲ್ಲಿ ಜಯ ಸಾಧಿಸುತ್ತಾ ಇರುವ ಕೊನೆಯ ದಿನದ ಯುದ್ಧದಲ್ಲಿ ಪೆರುಮಾಳ್ ಬಲ್ಲಾಳರು ಹಿಂದಿನಿಂದ ಬಾಣ ಬಿಟ್ಟು ಅಧರ್ಮ ಯುದ್ಧದಲ್ಲಿ ಕೋಟಿ ಬೈದ್ಯರು ವೀರ ಮರಣವನ್ನಪ್ಪುತ್ತಾರೆ. ಇದನ್ನು ತಿಳಿದ ಚೆನ್ನಯ ಬೈದ್ಯರು ತಲೆಯನ್ನು ಕಲ್ಲಿಗೆ ಬಡಿದು ಮರಣವನ್ನಪ್ಪುತ್ತಾರೆ. ಒಟ್ಟಿಗೆ ಜನನ ಮರಣವನ್ನು ಕಾರಣೀಕ ಪುರುಷರಾದ ಕೋಟಿ ಚೆನ್ನಯರು ಪಡೆಯುತ್ತಾರೆ. ಮುಂದೆ ಕೋಟಿ ಚೆನ್ನಯರನ್ನುಎಣ್ಮೂರು ಮಣ್ಣಿನಲ್ಲಿ ದಫನ ಮಾಡಲಾಯಿತು.

ಮತ್ತು ಗೋರಿಗಳನ್ನು ಕಟ್ಟಲಾಯಿತು ಮತ್ತು ಅವರ ಸುರಿಯ ವಸ್ತ್ರಾಭರಣಗಳನ್ನು ಗೋರಿಯ ಹತ್ತಿರ ಹುದುಗಿಸಿಡಲಾಯಿತುಈ ಜಾಗದಲ್ಲಿ ಹುತ್ತ ಬೆಳೆದಿದೆ, ಇದು ಬಹಳ ವಿಶೇಷ. ಮುಂದೆ ಬಲ್ಲಾಳರು ಅವಳಿ ವೀರರನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾಗ, ಬೆಳಗ್ಗಿನ ಜಾವ ಬಲ್ಲಾಳರಿಗೆ ಸ್ವಪ್ನ ಬೀಳುತ್ತದೆ. “ಓ ಬಲ್ಲಾಳರೇ ,ನಾವು ಕೋಟಿ ಚೆನ್ನಯರು. ನಾವು ನಿಮ್ಮ ಏಳು ಕೈಯ ಕೊಪ್ಪರಿಗೆಯ ಹಾಲು ಕುಡಿದವರು. ನಾವು ಕಾಯಬಿಟ್ಟು ಮಾಯ ಸೇರಿದ್ದೇವೆ. ಇನ್ನು ಮುಂದೆ ನಾವು ಎಣ್ಮೂರಿನಲ್ಲಿ *ಎಣ್ಮೂರ ಬೈದ್ಯೆರ್ಲು*  ಗಳಾಗಿ ಕಾರಣೀಕ ಪುರುಷರಾಗಿ ನೆಲೆ ನಿಲ್ಲುತ್ತೇವೆ. ಬಲ್ಲಾಳರೇ ನಮಗೆ ಗರಡಿ ಕಟ್ಟಿಸಿ , ಚಪ್ಪರೊಂಬು ಮಾಡಿಸಿ, ರಾಮ ಲಕ್ಷ್ಮಣರೆಂಬ ಸುರಿಯ ಮಾಡಿಸಿ ಬೀಡಿನ ಉಳ್ಳಾಕ್ಲು ಸ್ಥಾನದಿಂದ ಸುಗ್ಗಿ ತಿಂಗಳ ಪೂವೆಯಂದು ಭಂಡಾರ ತೆಗೆಸಿನಮಗೆ ಎಣ್ಮೂರು ನೇತ್ರಾದಿ ಗರಡಿಯಲ್ಲಿ ನೇಮ ನಡಾವಳಿ ನಡೆಸಿ, ಪ್ರಾತಃಕಾಲ ನಮಗೆ ಬೀಡಿನಲ್ಲಿ ನಿಮ್ಮ ಕೈಯಿಂದ ಹಾಲು ಕೊಡಬೇಕು” ಎಂಬ ಸಂದೇಶ ಸ್ವಪ್ನದಲ್ಲಿ ಗೋಚರಿಸಿತು.

ಅದರಂತೆ ಇಂದಿಗೂ ಪ್ರಥಮವಾಗಿ ಉಳ್ಳಾಕುಳು ದೈವಕ್ಕೆ ನೇಮ ನಡೆಯುತ್ತದೆ. ಮರುದಿನ ಇಷ್ಟದೇವತೆ ಮತ್ತು ಕಾಜುಕುಜುಂಬ ನೇಮದ ನಂತರ ಸುಗ್ಗಿ ತಿಂಗಳ ಪೂವೆಯಂದು ಎಣ್ಮೂರು ಬೈದೇರುಗಳ ನೇಮ ನಡೆಯುತ್ತದೆ. ಕೋಟಿ ಚೆನ್ನಯರ ನೇಮೋತ್ಸವ ಪ್ರಪ್ರಥಮವಾಗಿ ಎಣ್ಮೂರಿನಲ್ಲಿ ದೇವು ಬಲ್ಲಾಳರಿಂದಲೇ ನಡೆದದ್ದು ಎಂಬ ವಿಚಾರ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದುಬರುತ್ತದೆ.ಬೇಯಿಸಿದ ಭತ್ತ ಮೊಳಕೆ ಬಂದ ಕಡೆ ಗರಡಿ ಕಟ್ಟಿಸಬೇಕೆಂದು ತಿಳಿದಂತೆ 2೦೦ ಕ್ಕು ಹೆಚ್ಚು ಗರಡಿಗಲು ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ಗರಡಿಗಳಲ್ಲೂ ನೇಮೋತ್ಸವ ನಡೆಯುವಾಗ ಇಂದಿಗೂ ಎಣ್ಮೂರು ನೇತೃತ್ವದ ಗರಡಿ ಎಲ್ಲಾ ಗರಡಿಗಿಂತ *ಆದಿ(ಮೂಲ)* ಗರಡಿ ಎಂದು ಹೇಳುವ ವಾಕ್ಯ ಇಂದಿಗೂ ಸತ್ಯವಾಗಿದೆ. ಬಲ್ಲಾಳರ ನಂತರ ಎಣ್ಮೂರು ಕಟ್ಟ ಬೀಡಿನ ಬಂಟ ಮನೆತನದವರು ಸಂಪ್ರದಾಯಕ್ಕೆ ಚ್ಯುತಿಬರದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

Credits : https://m.facebook.com/Shree-Nagabrahma-Koti-Chennaya-Aadi-baiderlena-Garadi-Yenmoor-1425070174430112/